ಮತ್ತೇ ಕುದಿಯುತ್ತಿದೆ ಮಣಿಪುರ...ಡಿಸಿಎಂಗಳ ನೇಮಕಕ್ಕೆ ತೀವ್ರ ವಿರೋಧ | Manipur violence

Manipur violence | ಮಣಿಪುರದಲ್ಲಿ ಹಿಂಸಾಚಾರ ( ಸಂಗ್ರಹ ಚಿತ್ರ-ಪಿಟಿಐ)
Manipur violence | ಮಣಿಪುರದಲ್ಲಿ ಹಿಂಸಾಚಾರ ( ಸಂಗ್ರಹ ಚಿತ್ರ-ಪಿಟಿಐ)
Published on
ಇಂಫಾಲ್‌: ಮಣಿಪುರದ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದ ನೆಮ್ಚಾ ಕಿಪ್ಗೆನ್ ಆಯ್ಕೆಯನ್ನು ವಿರೋಧಿಸಿ ಗುರುವಾರ ಚುರಾಚಂದ್‌ಪುರದಲ್ಲಿ ದೊಡ್ಡ ಮಟ್ಟದ ಹಿಂಸಾಚಾರ ಭುಗಿಲೆದ್ದಿದೆ ಎಂದು ವರದಿಯಾಗಿದೆ.
ನೆಮ್ಚಾ ಕಿಪ್ಗೆನ್ ನೂತನ ಉಪಮುಖ್ಯಮಂತ್ರಿಯಾಗಿ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಸೇರ್ಪಡೆಗೊಂಡಿದ್ದೇ ಈ ಘಟನೆಗೆ ಕಾರಣ ಎನ್ನಲಾಗಿದ್ದು, ಪ್ರತಿಭಟನಾಕಾರರು ತುಯಿಬಾಂಗ್ ಬಜಾರ್ ಬಳಿ ಜಮಾಯಿಸಿ ಟೈರ್‌ಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ವರದಿಯಾಗಿದೆ.

ಪರಿಸ್ಥಿತಿ ಹದಗೆಟ್ಟಿದ್ದು ಹೀಗೆ

ಭದ್ರತಾ ಪಡೆಗಳು ಪ್ರತಿಭಟನಾ ನಿರತರನ್ನು ಚದುರಿಸಲು ಪ್ರಯತ್ನಿಸಿದಾಗ ಪರಿಸ್ಥಿತಿ ಹದಗೆಟ್ಟಿತು ಮತ್ತು ನಿಯೋಜಿಸಲಾದ ಸಿಬ್ಬಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದ ಹೋರಾಟಗಾರರು ಕಲ್ಲು ತೂರಾಟ ನಡೆಸಲು ಪ್ರಾರಂಭಿಸಿದರು ಎನ್ನಲಾಗಿದೆ.
ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಭದ್ರತಾ ಪಡೆಗಳು ಲಾಠಿ ಪ್ರಹಾರ ನಡೆಸಿದ್ದು, ಇಬ್ಬರು ಸಣ್ಣಪುಟ್ಟ ಗಾಯಗಳಿಂದ ಬಳಲುತ್ತಿದ್ದಾರೆ. ಪರಿಸ್ಥಿತಿ ಇನ್ನೂ ಉದ್ವಿಗ್ನವಾಗಿದ್ದು, ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಮಾಣ ವಚನ

ಮಣಿಪುರದಲ್ಲಿ ಸುಮಾರು ಒಂದು ವರ್ಷದ ಬಳಿಕ ರಾಷ್ಟ್ರಪತಿ ಆಳ್ವಿಕೆ ಅಂತ್ಯಗೊಳಿಸಿ ಬಿಜೆಪಿಯ ಹಿರಿಯ ನಾಯಕ ವೈ. ಖೇಮಚಂದ್ ಸಿಂಗ್ (Y. Khemchand Singh) ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
ಇಂಫಾಲ್‌ನ ಲೋಕ ಭವನದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ ನೇತೃತ್ವದಲ್ಲಿ, ಸಿಎಂ ವೈ. ಖೇಮಚಂದ್ ಸಿಂಗ್, ಉಪಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಕುಕಿ ಸಮುದಾಯದ ನಾಯಕಿ ನೆಮ್ಚಾ ಕಿಪ್ಗೆನ್ ಮತ್ತು ಎನ್‌ಪಿಎಫ್ ನಾಯಕ ಲೋಸಿ ದಿಖೋ ಪ್ರತಿಜ್ಞಾವಿಧಿ ಸ್ವೀಕರಿಸಿದರು.

ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ರದ್ದು

ಮಣಿಪುರದಲ್ಲಿ ಕಳೆದ ಒಂದು ವರ್ಷದಿಂದ ಜಾರಿಯಲ್ಲಿದ್ದ ರಾಷ್ಟ್ರಪತಿ ಆಳ್ವಿಕೆಯನ್ನು ಇಂದು (ಫೆಬ್ರವರಿ 4) ಅಧಿಕೃತವಾಗಿ ಹಿಂಪಡೆಯಲಾಯಿತು. ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವಿನ ತೀವ್ರ ಜನಾಂಗೀಯ ಹಿಂಸಾಚಾರದ ಹಿನ್ನೆಲೆಯಲ್ಲಿ ಅಂದಿನ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ರಾಜೀನಾಮೆ ನೀಡಿದ ಬಳಿಕ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿತ್ತು. ಇದೀಗ ಪರಿಸ್ಥಿತಿ ಸುಧಾರಿಸುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ಚುನಾಯಿತ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ.
ಸಂವಿಧಾನದ 356 ನೇ ವಿಧಿಯ ಷರತ್ತಿನ (2) ರ ಮೂಲಕ ನೀಡಲಾದ ಅಧಿಕಾರವನ್ನು ಚಲಾಯಿಸಿ, ಭಾರತದ ರಾಷ್ಟ್ರಪತಿಗಳಾದ ನಾನು, ದ್ರೌಪದಿ ಮುರ್ಮು, ಫೆಬ್ರವರಿ 13, 2025 ರಂದು ಮಣಿಪುರ ರಾಜ್ಯಕ್ಕೆ ಸಂಬಂಧಿಸಿದಂತೆ ನಾನು ಹೊರಡಿಸಿದ ಘೋಷಣೆಯನ್ನು ಫೆಬ್ರವರಿ 4, 2026 ರಿಂದ ಜಾರಿಗೆ ಬರುವಂತೆ ರದ್ದುಗೊಳಿಸುತ್ತಿದ್ದೇನೆ ಎಂದು ರಾಷ್ಟ್ರಪತಿಗಳು ಹೊರಡಿಸಿದ ಘೋಷಣೆಯಲ್ಲಿ ತಿಳಿಸಲಾಗಿದೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net